ಬೆಂಗಳೂರು,ಏ,20: ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಾರೂ ನೀತಿಪಾಠ ಹೇಳುವ ಅಗತ್ಯವಿಲ್ಲ ಎಂದು ಹೇಳಿರುವ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ, ಈ ಕುರಿತು ಬರುವ ವಿಧಾನಮಂಡಲದ ಅಧಿವೇಶನದಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ವರ್ಗದಲ್ಲಿ ತುಳಿತಕ್ಕೊಳಗಾಗಿರುವ ಸಣ್ಣ ಸಣ್ಣ ಉಪಜಾತಿಗಳಿಗೆ ಸ್ವಾತಂತ್ರ್ಯ ಬಂದು ೬೦ ವರ್ಷ ಕಳೆದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಎಲ್ಲರಿಗೂ ಸಮಾನ ನ್ಯಾಯ ಹಾಗೂ ಸರ್ಕಾರದ ಸವಲತ್ತುಗಳು ದೊರೆಯುವಂತಾಗಲು ಒಳಮೀಸಲಾತಿ ಅನಿವಾರ್ಯ ಎಂದು ಹೇಳಿದರು.
ಕಳೆದ ೧೫ ವರ್ಷಗಳಿಂದ ಒಳ ಮೀಸಲಾತಿ ವ್ಯವಸ್ಧೆ ಜಾರಿಗೆ ತರಬೇಕು ಎಂಬ ಬೇಡಿಕೆಯಿದೆ. ಹಿಂದೆ ವಿಧಾನಸಭೆಯಲ್ಲಿ ಈ ಸಂಬಂಧ ತಾವು ಖಾಸಗಿ ಮಂಡಿಸಿದ್ದ ಖಾಸಗಿ ನಿರ್ಣಯ ಈಗಲೂ ನೆನೆಗುದಿಗೆ ಬಿದ್ದಿದೆ. ಈ ಬಾರಿ ನಡೆಯಲಿರಯುವ ಅಧಿವೇಶನದಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ನುಡಿದರು.
ಗ್ರಾಮಪಂಚಾಯತ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶೋಷಿತ ಸಮುದಾಯದ ಬೆಂಬಲ ಪಡೆಯಲು ನಡೆಸುತ್ತಿರುವ ಗಿಮಿಕ್ ಇದಲ್ಲ. ಒಳ ಮೀಸಲಾತಿ ಕಲ್ಪಿಸುವ ಸಂಬಂಧ ವಸ್ತುಸ್ಧಿತಿ ಅಧ್ಯಯನ ನಡೆಸುವ ಸಲುವಾಗಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿದ್ದರು. ಆದರೆ ಇಲ್ಲಿಯವರೆವಿಗೆ ಆಯೋಗಕ್ಕೆ ಸೂಕ್ತ ಹಣಕಾಸಿನ ಸೌಲಭ್ಯ ದೊರಕಿಸಿಕೊಟ್ಟಿರಲಿಲ್ಲ. ಈಗ ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಎಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶೋಷಿತ ವರ್ಗಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ತಂದಿದ್ದ ಪ್ರಸ್ತಾವನೆಯನ್ನು ಬಿಜೆಪಿ ಸಚಿವರು ವಿರೋಧಿಸಿದ್ದರು ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಡಿರುವ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದ ಸಚಿವರು, ಅಂತಹ ಯಾವುದೇ ಪ್ರಸ್ತಾಪ ಸಂಪುಟದ ಮುಂದೆ ಬಂದಿರಲಿಲ್ಲ. ಹಾಗೇನಾದರೂ ಇದ್ದರೆ ತಾವು ಯಾವುದೇ ಶಿಕ್ಷೆ ಎದುರಿಸಲು ಸಿದ್ಧ ಎಂದು ಹೇಳಿದರು.
ಶೋಷಿತ ಸಮುದಾಯದಲ್ಲೂ ಕೂಡ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಸೌಲಭ್ಯಕಲ್ಪಿಸಬೇಕು. ಹಾಗಾದಾಗ ಮಾತ್ರ ಅವಕಾಶ ವಂಚಿತ ಸಮುದಾಯಗಳಿಗೆ ಸೂಕ್ತ ನ್ಯಾಯ ಸಲ್ಲುತ್ತದೆ. ದಲಿತ ಸಮುದಾಯದಲ್ಲಿ ಪದೇ ಪದೇ ಸೌಲಭ್ಯ ಪಡೆದವರೇ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಉಳಿದವರಿಗೆ ಅನ್ಯಾಯವಾಗುತ್ತಿದೆ ಎಂದರು.